ಹಾಸನ: ಕೆರೆಗೆ ಉರುಳಿಬಿದ್ದ ಕಾರು, ಐವರು ಜಲಸಮಾಧಿ

  ಹಾಸನ: ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಕಾರು ಉರುಳಿ ಬಿದ್ದು ಐವರು ಸಾವನ್ನಪ್ಪಿರುವ ಘಟನೆ ಹಾಸನ ತಾಲೂಕಿನ  ಹನುಮನಹಳ್ಳಿಯಲ್ಲಿ  ನಡೆದಿದೆ.

 

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಕಾರು ಉರುಳಿ ಬಿದ್ದಿದ್ದು, ಕೆರೆಯಲ್ಲಿ ಶವ ತೇಲುತ್ತಿದ್ದುದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಮೃತ ದೇಹ ಹೊರ ತೆಗೆಯುವಾಗ ಉಳಿದ ನಾಲ್ಕು ಶವಗಳು ಕಾರಿನಲ್ಲೇ ಸಿಲುಕಿದ್ದನ್ನು ಗಮನಿಸಿದ ಪೊಲೀಸರು ಮೇಲಕ್ಕೆತ್ತಿದ್ದಾರೆ.

 

ಮೃತರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ.ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆಯ ಅನಿಲ್(25), ಶಿವಮೊಗ್ಗದ ಮೂಲದ ಉಮೇಶ್  ಮತ್ತು ಅರ್ಜುನ್, ಎಂದು ತಿಳಿದು ಬಂದಿದೆ. ಇಬ್ಬರು ಮಹಿಳೆಯರ ಗುರುತು ಪತ್ತೆಯಾಗಬೇಕಿದೆ.

 

ಅನಿಲ್ ಪಾಕೆಟ್ ನಲ್ಲಿದ್ದ ಸಿನಿಮಾ ಟಿಕೆಟ್ ನಿಂದಾಗಿ, ಅವರು ಸಿನಿಮಾಗೆ ತೆರಳಿ ತಡರಾತ್ರಿ ಮನೆಗೆ ವಾಪಾಸಾಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಹಾಸನದಲ್ಲಿ ತುಂಬಾ ಕೆಲಸವಿದ್ದು ಮನೆಗೆ ಬರುವುದು ತಡವಾಗುತ್ತದೆ ಎಂದು ಅನಿಲ್ ತನ್ನ ತಾಯಿಗೆ ಕರೆ ಮಾಡಿ ತಿಳಿಸಿದ್ದಾಗಿ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 

ತಮ್ಮ ಜೊತೆ ಇಬ್ಬರು ಮಹಿಳೆಯರನ್ನು ಕರೆದುಕೊಂಡು ಮೂವರು ಎಲ್ಲಿಗೆ ತೆರಳುತ್ತಿದ್ದರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೊಳೆ ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Category: